ತರ್ಬರ್, ಜೇಮ್ಸ್ ಗ್ರೋವರ್
1894-1961. ಅಮೆರಿಕದ ಪ್ರಸಿದ್ಧ ಹಾಸ್ಯ ಲೇಖಕ ಮತ್ತು ವ್ಯಂಗ್ಯ ಚಿತ್ರಕಾರ. ಹುಟ್ಟಿದ್ದು ಓಹಾಯೋ ಸಂಸ್ಥಾನದ ಕಲಂಬಸ್‍ನಲ್ಲಿ. ಬಾಲ್ಯದಲ್ಲಾದ ಅಪಘಾತ ಒಂದರಿಂದ ಒಂದು ಕಣ್ಣು ಕುರುಡಾಯಿತು. ಚಿಕ್ಕಂದಿನಿಂದಲೂ ಈತನಿಗೆ ಚಿತ್ರ ಬರೆಯುವುದರಲ್ಲೂ, ಸಾಹಿತ್ಯ ರಚನೆಯಲ್ಲೂ ಆಸಕ್ತಿಯತ್ತು. ಯೂನಿವರ್ಸಿಟಿ ನ್ಯೂಸ್ ಪೇಪರ್ ವರದಿಗಾರನಾಗಿ ಮೊದಲು ಅನುಭವ ಪಡೆದ. ಒಂದನೆಯ ಮಹಾಯುದ್ಧದಲ್ಲಿ ಸೈನ್ಯಕ್ಕೆ ಸೇರಲು ಅನರ್ಹನೆನಿಸಿದಾಗ ಒಂದು ವರ್ಷ ಕಾಲ ಯುದ್ಧದ ರಹಸ್ಯ ವಾರ್ತಾ ವಿಭಾಗದಲ್ಲಿ ಗುಮಾಸ್ತನಾಗಿ ಕೆಲಸ ಮಾಡಿದ. ಅನಂತರ ಪ್ಯಾರಿಸ್‍ನಲ್ಲಿ ಷಿಕಾಗೊ ಟ್ರಿಬ್ಯೂನ್ ಪತ್ರಿಕೆಯ ಸಂಪಾದಕ ವರ್ಗದಲ್ಲಿ 1926ರವರೆಗೂ ಕೆಲಸ ಮಾಡಿದ. 1929ರಲ್ಲಿ ಅಮೆರಿಕಕ್ಕೆ ಹಿಂತಿರುಗಿ ನ್ಯೂಯಾರ್ಕರ್ ಪತ್ರಿಕೆಯ ಸಂಪಾದಕ ವರ್ಗದಲ್ಲಿ ಒಬ್ಬನಾದ. ಕ್ರಮೇಣ ಆ ಪತ್ರಿಕೆಯ ಜೀವಾಳವೇ ತಾನಾಗಿ ಕಾರ್ಯನಿರ್ವಾಹಕ ಸಂಪಾದಕನೆನಿಸಿಕೊಂಡ. ಪತ್ರಿಕೆಗಾಗಿ ಹಾಸ್ಯ ಲೇಖನಗಳನ್ನೂ ವ್ಯಂಗ್ಯ ಚಿತ್ರಗಳನ್ನೂ ಬರೆದು ಖ್ಯಾತನಾದ.

1922ರಲ್ಲಿ ಆಲ್ತಿ ಆ್ಯಡಮ್ಸ್ ಎಂಬಾಕೆಯನ್ನು ಮದುವೆಯಾಗಿ 1934ರಲ್ಲಿ ಆಕೆಯಿಂದ ವಿವಾಹ ವಿಚ್ಛೇದನ ಪಡೆದು ಅನಂತರ ಹೆಲೆನ್ ವಿಸ್ಮರಳನ್ನು ಮದುವೆಯಾದ.

ಹಾಸ್ಯ ಸಾಹಿತ್ಯಕ್ಕೆ ಈತನ ಕಾಣಿಕೆಗಳು ಅಮೂಲ್ಯವಾದವು. ಇ.ಬಿ. ಹ್ವೈಟ್‍ನೊಂದಿಗೆ ಸೇರಿ ಬರೆದ ಈತನ ಮೊದಲ ಪುಸ್ತಕ ಈಸ್ ಸೆಕ್ಸ್ ನೆಸ್ಸೆಸರಿ ? 1939 ರಲ್ಲಿ ಪ್ರಕಟವಾಯಿತು. ದಿ ಔಲ್ ಇನ್ ದಿ ಅಟಿಕ್ (1931); ದಿ ಸೀಲ್ ಇನ್ ದಿ ಬೆಡ್‍ರೂಮ್ (1932); ಮೈ ಲೈಫ್ ಅಂಡ್ ಹಾರ್ಡ್‍ಟೈಮ್ಸ್ (1934); ದಿ ಮಿಡ್ಲ್ - ಏಜ್ಡ್ ಮ್ಯಾನ್‍ಆನ್ ದಿ ಟ್ರ್ಯಾಪೀಜ್ (1935); ಲೆಟ್‍ಯುವರ್ ಮೈಂಡ್ ಅಲೋನ್ (1937), ದಿ ಲಾಸ್ಟ್ ಫ್ಲವರ್ (1939); ಮೈವಲ್ರ್ಡ್ ಅಂಡ್ ವೆಲ್‍ಕಮ್ ಟು ಇಟ್ (1942), ಮೆನ್, ವಿಮೆನ್ ಅಂಡ್ ಡಾಗ್ಸ್ (1943); ದಿ ತರ್ಬರ್ ಕಾರ್ನಿವಲ್ (1945), ದಿ ಬೀಸ್ಟ್ ಇನ್ ಮಿ ಅಂಡ್ ಅದರ್ ಅನಿಮಲ್ಸ್ (1948); ದಿ ತರ್ಬರ್ ಆಲ್ಬಮ್ (1952); ದಿ ತರ್ಬರ್ ಕಂಟ್ರಿ (1953); ದಿ ತರ್ಬರ್ ಡಾಗ್ಸ್ ( 1955) : — ಇವು ಈತನೇ ಬರೆದ ವ್ಯಂಗ್ಯ ಚಿತ್ರಗಳಿಂದ ಕೂಡಿದ ಹಾಸ್ಯ ಬರಹಗಳು. ಎಲಿಯಟ್ ನ್ಯೂಜೆಂಟ್‍ನೊಂದಿಗೆ ಸೇರಿ ದಿ ಮೇಲ್ ಅನಿಮಲ್ (1940); ಎಂಬ ನಾಟಕವನ್ನೂ ಈತ ಬರೆದ.

ಮಕ್ಕಳಿಗಾಗಿ ಬರೆದ ಫೇಬಲ್ಸ್ ಫಾರ್ ಅವರ್ ಟೈಮ್ (1940); ಮೆನಿಮೂನ್ಸ್ (1943); ದಿ ತರ್ಟೀನ್ ಕ್ಲಾಕ್ಸ್ (1950); — ಇವು ವಿಸ್ಮಯಕರವಾದ ಕಲ್ಪನೆ ಹಾಗೂ ನವುರಾದ ಹಾಸ್ಯದಿಂದ ಕೂಡಿದ ಪುಸ್ತಕಗಳಾಗಿವೆ

ಮೈ ಲೈಫ್ ಅಂಡ್ ಹಾರ್ಡ್ ಟೈಮ್ಸ್ ಎಂಬುದು ಈತನ ಆತ್ಮಕಥೆ. ದಿ ಸೀಕ್ರೇಟ್ ಲೈಫ್ ಆಫ್ ವಾಲ್ಟರ್ ಮಿಟಿ ಈತನಿಗೆ ಪ್ರಸಿದ್ಧಿ ತಂದ ಕಥೆ. ಇದರಲ್ಲಿನ ಮಿಟಿ ಪಾತ್ರವಂತೂ ಒಂದು ಅಮೋಘ ಸೃಷ್ಟಿ. ಹಗಲುಗನಸುಗಳಲ್ಲಿ ತಾನೊಬ್ಬ ಮಹಾಶೂರ ಸಾಹಸಿಯಾಗಿ ಮೆರೆಯುವ ಮಿಟಿ ವಾಸ್ತವವಾಗಿ ಅಮ್ಮಾವ್ರ ಗಂಡ. ಈ ಕಥೆಯ ಉದ್ದಕ್ಕೂ ನಗೆಯ ಬುಗ್ಗೆ ಚಿಮ್ಮುತ್ತದೆ. ದಿ ತರ್ಬರ್ ಕಾರ್ನಿವಲ್ ಈತನ ಶ್ರೇಷ್ಠ ಬರಹಗಳ ಹಾಗೂ ಚಿತ್ರಗಳ ಒಂದು ಸಂಕಲನ.

ಈತ ವಿಸ್ಮಯಕರವಾದ ಸನ್ನಿವೇಶಗಳಲ್ಲಿ ಸಿಕ್ಕಿಕೊಳ್ಳುವ ವಿಲಕ್ಷಣ ವ್ಯಕ್ತಿಗಳನ್ನು ಚಿತ್ರಿಸುವುದರಲ್ಲಿಯೂ ಸರಸ ದಾಂಪತ್ಯ ಜೀವನ ಚಿತ್ರಿಸುವುದರಲ್ಲೂ ಹೆಸರಾಗಿದ್ದಾನೆ. ಈತನ ಹಾಸ್ಯದಲ್ಲಿ ವಿಡಂಬನೆ, ಅಸಂಗತ ಗುಣ, ಅಣಕ, ನಿವ್ರ್ಯಾಜವಾದ ವಿನೋದ ಬೆರೆತಿವೆ. ಈತ ಬರೆದ ವ್ಯಂಗ್ಯ ಚಿತ್ರಗಳು ಅಮೋಘವಾದವು. ಒಮ್ಮೆ ನೋಡಿದರೆ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವಂಥವು. ಪರಮ ಔದಾಸೀನ್ಯದಿಂದ ನೋಡುವ ನಾಯಿಗಳು; ಚಂಡಿಯರಾಗಿ ಕೆಲವು ಕಡೆ ಭಯಂಕರವಾಗಿ ಕಾಣುವ ಹೆಂಗಸರು; ತುಂಬ ವಿಚಾರವಂತರೆಂದು ಕಾಣಲೆತ್ತಿಸಿ, ವಿಫಲರಾದ, ಬೆಪ್ಪು ಬೆಪ್ಪಾಗಿ ಕಾಣುವ ಗಂಡಸರು ತರ್ಬರ್‍ನ ವ್ಯಂಗಚಿತ್ರಗಳಲ್ಲಿ ಚಿರಸ್ಮರಣೀಯರಾಗಿದ್ದಾರೆ. ಈತ ಚಿತ್ರಿಸುವ ನಾಯಿಗಳದೇ ಒಂದು ಪ್ರತ್ಯೇಕ ಲೋಕ.

ತರ್ಬರ್‍ನ ಹಾಸ್ಯ ಕೇವಲ ನಗೆ ಆಹ್ಲಾದಗಳ ಮಿತಿಯಲ್ಲಿ ನಿಲ್ಲುವುದಿಲ್ಲ. ಅದರ ಹಿಂದೆ ಇರುವ ಮಾನವ ಸ್ವಭಾವ ವೈಚಿತ್ರವನ್ನು ಕುರಿತು ಮರುಕ, ಬದುಕಿನ ಬಗ್ಗೆ ಗಂಭೀರವಾದ ಚಿಂತನೆ; ನಗಿಸುವುದರ ಜೊತೆಗೆ ಮೆತ್ತಗೆ ಪ್ರಜ್ಞೆಯನ್ನು ತಟ್ಟಿ ಎಬ್ಬಿಸುವ ಗುಣ ಇವನ್ನು ಈತನಲ್ಲಿ ಕಾಣಬಹುದು. ಟಿ. ಎಸ್. ಎಲಿಯಟ್ ತರ್ಬರ್‍ನ ಹಾಸ್ಯ ಬರೆಹಗಳನ್ನು ಮೆಚ್ಚಿ ಆತನ ಪ್ರತಿಭೆ ಮತ್ತು ಹಾಸ್ಯದ ಬಗೆ ವಿಮರ್ಶಾತ್ಮಕ ಲೇಖನ ಬರೆದಿದ್ದಾನೆ, ತರ್ಬರ್‍ನ ಹಾಸ್ಯ ವಿಶಿಷ್ಟವಾದುದು, ಅನನುಕರಣೀಯವಾದದು. ಅದರ ಹಿಂದೆ ಜೀವನದ ವಿಮರ್ಶೆಯೇ ಅಡಗಿದೆ ಎಂದು ಆತ ಹೇಳಿದ್ದಾನೆ. ಅಮೆರಿಕದ ಅವರ ಹಾಸ್ಯ ಸಾಹಿತಿಗಳಾದ ಆಲಿವರ್ ವೆಂಡಲ್‍ಹೋಮ್ಸ್ ಮತ್ತು ಮಾರ್ಕ್‍ಟ್ಟೇನರ ಪಂಕ್ತಿಯಲ್ಲಿ ತರ್ಬರ್ ನಿಲ್ಲುತ್ತಾನೆ.
ತರ್ಬರ್ ನ್ಯೂಯಾರ್ಕಿನಲ್ಲಿ ಮರಣ ಹೊಂದಿದ.
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ